Thursday, February 12, 2009

ಅಪ್ಪಾ...ಸೋತೆ ಅನ್ಸಿತ್ತಾ ನಿಂಗೆ?

ಅಪ್ಪಾ ನಿನ್ ಕಂಡ್ರೆ ನಂಗೆ ತುಂಬಾ ಇಷ್ಟಾ ಅಂತ ಗೊತ್ತಿಲ್ವಾ? ‘ನಿಮ್ ಪ್ರೀತಿ ಮಗ್ಳು ಯಾವಾಗ್ಲೂ ನಿಮ್ಗೇ ಸಪೋರ್ಟು’ ಅಂತ ಅಮ್ಮ ಅಂದಾಗ್ಲೆಲ್ಲಾ ನೀನು ಒಂದ್ ಪುಟ್ಟ ಸ್ಮೈಲ್ ಕೊಡ್ತಿದ್ದೆ ನೆನ್ಪಿದ್ಯಾ?? ಆಗಂತೂ ನಾನು ನಿನ್ ಜೊತೇಗ್ ನಿಲ್ಲೋದ್ ಇನ್ನೂ ಜಾಸ್ತೀನೇ ಮಾಡ್ತಿದ್ದೆ.

ನಾನ್ ಎಷ್ಟ್ ಮಾತಾಡ್ತಿದ್ನಲ್ವಾ? ನಿಂಗೆ ಅಷ್ಟ್ ಮಾತಾಡೋದು ಇಷ್ಟ ಇಲ್ಲ. ನೀನು ಇಂಟ್ರೋವರ್ಟು. ಆದ್ರೂ ನನ್ ಮಾತನ್ನೆಲ್ಲಾ ಕೇಳ್ಸಕೊತಿದ್ದೆ. ಪ್ರತಿ ದಿನಾ ಕಾಲೇಜಿಂದ ಬಂದ್ ಮೇಲೆ ಸಿಂಧು ಹಾಗೆ ಹೀಗೆ ಅಂತ ನಿಂಗೆ ಅಮ್ಮಂಗೆ ತಲೆ ತಿಂತಿದ್ದೆ. ಆದ್ರೆ ನಿಂಗೆ ಯಾವತ್ತಾದ್ರೂ ನನ್ ಬೆಸ್ಟ್ ಫ್ರೆಂಡ್ ಹೆಸ್ರು ಹೇಳು ಅಂದ್ರೆ ಗೊತ್ತಿರ್ತಿರ್ಲಿಲ್ಲ. ಆದ್ರೆ ಅಮ್ಮ ನಾನ್ ಹೇಳಿದ್ದನ್ನೆಲ್ಲಾ ಜ್ನಾಪಕ ಇಟ್ಕೊಂಡು ನಿಂಗೂ ಜ್ನಾಪಿಸುತ್ತಿದ್ಲು ಆದ್ರೂ, ಏನೋ ನಾನು ಹೆಚ್ಚು ಒತ್ತುಕೊಟ್ಟು ನಿಂಗೇ ಎಲ್ಲಾ ಹೇಳ್ತಿದ್ದೆ.

ಅಮ್ಮಂಗಿಂತ ನಿಂಗೆ ಸಿಟ್ಟು ಜಾಸ್ತಿ ಅನ್ಸಲ್ವ? ಅಕ್ಕನ ಮದ್ವೇಲಿ ನಾನು ಓಡಾಡ್ತಿದ್ದಿದ್ ನೋಡಿ ಎಲ್ಲರೂ ‘ ಇವ್ಳೊಬ್ಳೇ ಸಾಕು ಕಣೋ ನಿಂಗೆ, ನಿನ್ ಬಲ್ಗೈ ಥರ.’ ಅಂತ ಹೇಳೋವಾಗ ನೀನು ಎಷ್ಟು ಖುಷಿಯಾಗಿದ್ದೆ. ಇನ್ನೂ ಅದೆಲ್ಲಾ ನನ್ ಕಣ್ಣಿಗ್ ಕಟ್ದಾಗ್ ಇದೆ. ಆಗ ಶಾಮಣ್ಣ ಮಾಮ ‘ಇವ್ಳಿಗೂ ಬೇಗ ಮದ್ವೆ ಮಾಡಿ ಮುಗ್ಸು.’ ಅಂದಾಗ ನಿಂಗೆ ಅಮ್ಮಂಗೆ ಮನ್ಸ್ನಲ್ಲಿ ‘ಅಯ್ಯೋ ಇನ್ನ್ ಸ್ವಲ್ಪ ದಿನ ಇವ್ಳೂ ಹೊರ್ಟು ಹೋಗ್ತಾಳೆ’ ಅನ್ಸಿತ್ತು ಅಲ್ವ? ಆಗ್ಲೇ ನಂಗ್ ಅನ್ಸಿದ್ದು ಸಮರ್ಥ್ ವಿಷ್ಯ ನಿಂಗೆ ಹೇಳ್ಬಿಡ್ಬೇಕು ಅಂತ. ನಂಗೆ ನೀನು ಒಪ್ಪೇ ಒಪ್ತಿಯ ಅಂತ ನಂಬ್ಕೆ, ಯಾಕೆ ಅಂದ್ರೆ ಅವ್ನೂ ನಮ್ ಥರ ಸ್ಮಾರ್ಥರವನೇ ಮತ್ತು ಅಷ್ಟು ದೊಡ್ಡ ಕುಟುಂಬ, ಅಷ್ಟ್ ಆಸ್ತಿ, ಲಕ್ಷಣ. ನಂಗೆ ಅವ್ನಲ್ಲಿ ಏನು ಕಡಿಮೆ ಅನ್ನಿಸಲೇ ಇಲ್ಲ. ಅಕ್ಕನ್ ಮದುವೆಯಾಗಿ ಆರು ತಿಂಗ್ಳಿಗೆ ನಾನು ಹೇಳಿದ್ದೆ. ಅವತ್ತು ನೀನು ಎಷ್ಟು ಕೂಗಾಡಿದ್ದೆ. ನಿಂಗೆ ಅಂಥ ಪದಗಳು ಬಯ್ಯೋಕ್ಕೆ ಬರುತ್ತೆ ಅಂತ ಗೊತ್ತೇ ಇರ್ಲಿಲ್ಲ.ಚಿಕ್ಕ ವಯಸ್ಸಲ್ಲಿ ನಾನು ಅಕ್ಕನ್ನ ಕೋತಿ ಅಂದ್ರೂ ಸಾಕು ನೀನು ಹಾಗೆಲ್ಲಾ ಅನ್ಬಾರ್ದು ಬೈಬಾರ್ದು ಅಂತ ಹೇಳ್ಕೊಡ್ತಿದ್ದೆ ಅಲ್ವ. ಅದಕ್ಕೇ ಏನೋ ಕೆಟ್ಟ ಪದಗಳೇ ಗೊತ್ತಿರ್ಲಿಲ್ಲ ಕಾಲೇಜಿನಲ್ಲಿ ನನ್ನ ಸ್ನೇಹಿತರು ಮಾತಾಡಿದ್ರೆ ಕಣ್-ಕಣ್ ಬಿಡ್ತಿದ್ದೆ ಮತ್ತೆ ಅದನ್ನೇ ಮನೇಲ್ ಬಂದ್ ಹೇಳಿದ್ರೆ ಆಗ ಅಮ್ಮ ಅಯ್ಯೋ ಅಪ್ಪಂಗೆ ಇದೆಲ್ಲ ಇಷ್ಟ ಆಗಲ್ಲ ಅವ್ರ ಮುಂದೆ ಇದನ್ನೆಲ್ಲಾ ಮಾತಾಡ್ಬೇಡ ಅಂತಿದ್ಲು. ಮತ್ತೆ ಯಾವಾಗ ಪಾ ನೀನು ದ್ರಾಬೆ, ದರಿದ್ರ ಅನ್ನೋ ಪದಗಳನ್ನ ಕಲ್ತೆ?

ಅಮ್ಮಂಗೂ ಸಮರ್ಥ್ ಮತ್ತೆ ಅವನ ಮನೆಯವರು ಇಷ್ಟ ಆಗಿದ್ರು. ಅಥ್ವಾ ಅವ್ಳು ಹಾಗೆ ನಾಟ್ಕ ಮಾಡ್ತಿದ್ಲೇನೋ ಯಾಕಂದ್ರೆ ಅವ್ಳಿಗೆ ನನ್ನ ಖುಷಿ ಹೆಚ್ಚು ಬೇಕಿತ್ತು ನೀ ಒಬ್ನೇ ಅಲ್ವಾ ಹಾಗೆ ಆಡಿದ್ದು.

ಅವತ್ತು ‘ನಾನು ಹೆಚ್ಚೋ ಅವ್ನೋ?’ ಅಂತ ನೀನು ಅಂದಾಗ ನಂಗೆ ನೀನೇ ಹೆಚ್ಚು ಅನ್ಸಿದ್ದೆ ಅಪ್ಪಾ... ಆದ್ರೆ ಅವ್ನಿಗೆ ನಾನು ಹೆಚ್ಚಾಗಿದ್ದೆ. ಅವ್ನು ಅವ್ರ ಮನೇಲೆಲ್ಲಾ ನನ್ನ ಒಪ್ಸಿ ಎಲ್ಲಾ ತಯಾರು ಮಾಡಿದ್ದ. ನಿನ್ನ ಒಪ್ಪಿಗೆಯೊಂದೇ ಬಾಕಿಯಿದ್ದಿದ್ದು. ಎಲ್ಲರ ಬಲವಂತಕ್ಕೆ ನೀನು ಒಪ್ಪಿಕೊಂಡೆ. ಆದ್ರೆ ಅವತ್ತೇ ಮಾತಾಡ್ಸದ್ ಬಿಟ್ಟ್ಬಿಟ್ಯಲ್ಲಪ್ಪಾ.. ಯಾಕೆ? ಸೋತೆ ಅನ್ಸಿತ್ತಾ ನಿಂಗೆ? ಈಗೋಗೆ ಹರ್ಟ್ ಆಯ್ತಾ? ಯಾಕ್ ಹಿಂಗ್ ಮಾಡ್ಬಿಟ್ಟೆ ಅಪ್ಪಾ? ಇಲ್ಲ ನಿಂಗೆ ಈಗೋ ಇಲ್ಲಾ? ಚಿಕ್ಕವಯ್ಸ್ನಿಂದಾ ಇಲ್ಲೀವ್ರೆಗೂ ನಂಗೆ ಎಲ್ಲಾ ನೀನೇ ಕೊಡ್ಸಿದ್ದು ಹಾಗೇ ಮದುವೆ ಆಗೋನನ್ನೂ ನೀನೇ ಆರಿಸಬೇಕು ಅನ್ಕೊಂಡಿದ್ದೆ ಅನ್ಸತ್ತೆ ಅಲ್ವ? ನಂಗೆ ಈಗ ಅನ್ಸ್ತಿದೆ ಹೌದು ನಿನ್ ಆಯ್ಕೆಗೇ ಬಿಡ್ಬೇಕಿತ್ತು ಆಗ್ಲೂ ಇವ್ನೇ ಸಿಕ್ಕಿದ್ರೆ ಬೇಡಾ ಅಂತಿದ್ಯಾ? ನಾನಿವಾಗಿಲ್ಲಿ ತುಂಬ ಖುಷಿಯಾಗಿದಿನಿ.

ಸರಿಯಾಗಿ ಹತ್ತು ತಿಂಗ್ಳಾಯ್ತು ನಮ್ಮ ಮದ್ವೆ ಆಗಿ, ಹಾಗನ್ನೋಕ್ಕಿಂತಾ ನೀನು ನನ್ನ ಮಾತಾಡ್ಸೋದು ಬಿಟ್ಟು. ಇನ್ನು ಹತ್ತು ದಿನಕ್ಕೆ ದೀಪಾವಳಿ ಮದ್ವೆ ಆದ್ಮೇಲೆ ಮೊದಲ್ನೇ ದೀಪಾವಳಿ ಹುಡುಗಿ ಮನೇಲೇ ಮಾಡ್ಬೇಕು ಅಲ್ವಪ್ಪಾ? ಆದ್ರೆ ನಿಂಗೆ ನನ್ನ ನೋಡೋಕ್ಕಾಗ್ಲಿ, ಮಾತಾಡ್ಸಕ್ಕಾಗ್ಲಿ ಇಷ್ಟ ಇಲ್ಲ. ಅಮ್ಮ ಅಕ್ಕ ತುಂಬ ಜ್ನಾಪಕ ಬರ್ತಿದಾರೆ ನಿಮ್ಮನ್ನೆಲ್ಲಾ ನೋಡ್ಬೇಕು ಅನ್ನಿಸ್ತಿದೆ.....
ನಾವು ಬರದಾ ಅಪ್ಪಾ....

ನಿನ್ನ ಸ್ಪಂದನೆಗೆ ಕಾಯುತ್ತಾ,
ನಿನ್ನ ಪ್ರೀತಿಯ ಮಗಳು.

12 comments:

ಅನಿಕೇತನ ಸುನಿಲ್ said...

ಅಗ್ನಿ ಚಂದ್ರ,
ತುಂಬ ಚೆನ್ನಾಗಿ ಬರ್ದಿದೀರ.
ಇದಕ್ಕಿಂತ ಚೆನ್ನಾಗಿ ಮಗು ತನ್ನ ತಂದೆಗೆ ಪತ್ರ ಬರೆಯೋಕೆ ಸಾಧ್ಯಾನ? ಹಾಗೇನೇ ಇದನ್ನ ನೋಡಿಯೂ ಮಾತಾಡಿಸದೇ, ಹಣೆಗೆ ಹೂಮುತ್ತುಕೊಟ್ಟು ಮಗಳನ್ನ ಮನೆಗೆ ಕರತರದೆ ಇರೋಕಾಗುತ್ತಾ ಒಬ್ಬ ತಂದೆಗೆ?
ಬರೆಯುತ್ತಲೇ ಇರಿ.....ಶುಭವಾಗಲಿ :)
ಸುನಿಲ್.

mruganayanee said...

ಪುಟ್ಟಾ ಖುಷಿ ಆಗ್ತಿದೆ ನೀ ಬರೆಯೋಕ್ ಶುರು ಮಾಡಿದ್ದು. ಇನ್ನಷ್ಟು ಓದು ಮತ್ತಷ್ಟು ಬರಿ. by the way this is really simple and sweet. read Reshmas write up also.

Harisha - ಹರೀಶ said...

ಈ ಪತ್ರ ನೋಡಿದ ಮೇಲೆ ಯಾರಿಗೇ ಆಗ್ಲಿ ಹಳೆಯದೆಲ್ಲ ಮರೆತುಹೋಗುತ್ತೆ.. ಮನ ಮುಟ್ಟುತ್ತೆ...

ವಿ.ರಾ.ಹೆ. said...

ಚೆನ್ನಾಗಿದೆ. ಸರಳವಾಗಿದ್ದು ಮನಸಿಗೆ ತಟ್ಟುವಂತಿದೆ. ನೀವು ಬರೆಯೋಕೆ ಶುರು ಮಾಡಿದ್ದು ನೋಡಿ ಖುಷಿ ಆಯ್ತು. ಬರೆದದ್ದೂ ಖುಷಿ ಕೊಡ್ತು. ಬರೀತಾ ಇರಿ..

Ittigecement said...

ಅಗ್ನಿ ಚಂದ್ರ..

ಹ್ರದಯಸ್ಪರ್ಷಿ ಲೇಖನ...

ಚಂದವಾಗಿದೆ
ಅಪ್ಪ ಮಗಳ ಪ್ರೀತಿ..

ಅಭಿನಂದನೆಗಳು..

Umesh Balikai said...

ತುಂಬಾ ಚೆನ್ನಾಗಿದೆ ರೀ.. ಮನಸ್ಸಿನ ಭಾವನೆಗಳನ್ನ ತುಂಬಾ ಚೆನ್ನಾಗಿ ವ್ಯಕ್ತಪಡಿಸಿದ್ದೀರ. ಹೀಗೆ ಬರೀತಾ ಇರಿ.

Shree said...

@ANIKETHANA
thank you:)
@MRUGANAYANEE
thank u kane:)
@HARISH
thank u :)

Prasad said...

ನೀವು ಬಂದ್ರ, ಬ್ಲಾಗ್ ಪ್ರಪಂಚಕ್ಕೆ....ಸ್ವಾಗತ.
ಹಿರಿಯಕ್ಕನ ಚಾಳಿ ಮನೆ ಮಂದಿಗೆಲ್ಲ ಅನ್ನೋ ಮಾತು ನಿಜವಾದ ಹಾಗಾಯ್ತು
-ಪ್ರಸಾದ್.

Unknown said...

Muddagide..

Ramesh BV (ಉನ್ಮುಖಿ) said...

very nice :)

V.R.BHAT said...

ಆರ್ಷೇಯ ಪದ್ಧತಿಯಂತೆ ನಿಮ್ಮೆಲ್ಲರ ಮನೆಗಳ ಮನಗಳ ಹತ್ತಿರ ಬಂದು ಯುಗಾದಿಯ, ಹೊಸವರ್ಷದ ಶುಭಾಶಯಗಳನ್ನು ಕೋರುತ್ತಿದ್ದೇನೆ, ಹೊಸವರ್ಷ ತಮಗೆಲ್ಲ ಸುಖ-ಸಮೃದ್ಧಿದಾಯಕವಾಗಿರಲಿ

ಗುರುರಾಜ್ said...

ishta aythu